ದಿನಾಂಕ: 19-03-2025 ರಂದು ಮಗ್ಗೆ ಗ್ರಾಮ ಪಂಚಾಯತ್ ಸಮುದಾಯ ಭವನ, ಮಗ್ಗೆ, ಆಲೂರು ತಾಲ್ಲೂಕು, ಹಾಸನ ಜಿಲ್ಲೆಯಲ್ಲಿ C.M.S.S.S. ಸಂಸ್ಥೆ, ಜೀವನಜ್ಯೋತಿ ಒಕ್ಕೂಟ ಹಾಸನ, ಅಮರಜ್ಯೋತಿ ಮಹಾಸಂಘ ಮಗ್ಗೆ, ಸ್ನೇಹಜ್ಯೋತಿ ಮಹಾಸಂಘ ರಾಯರಕೊಪ್ಪಲು ಇವರ ಸಹಯೋಗದಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು 110 ಜನ ಸಂಘದ ಸದಸ್ಯರೊಂದಿಗೆ ವಿಜೃಂಭಣೆಯಿಂದ ಆಚರಿಸಲಾಯಿತು. ಸಂಸ್ಥೆಯ ನಿಯೋಜಿತ ನಿರ್ದೇಶಕರಾದ ವಂ. ಸ್ವಾಮಿ ಆಲ್ವಿನ್ ಡಿಸೋಜಾರವರು ಗಿಡಕ್ಕೆ ನೀರು ಎರೆಯುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅವರು ಮಹಿಳೆಯರ ಮಾತೃತ್ವ, ಕಾರ್ಯತ್ವ ಮತ್ತು ನಾಯಕತ್ವದ ಮಹತ್ವವನ್ನು ವಿವರಿಸಿ, ನಾಸಾದ ಗಗನಯಾತ್ರಿಯಾದ ಸುನಿತಾ ವಿಲಿಯಮ್ಸ್ ಅವರ ಸಾಧನೆಯನ್ನು ಸ್ಮರಿಸಿದರು. ಅವರು ಮಹಿಳೆಯರ “ಶಕ್ತಿಯ ಸಂಕೇತ” ಎಂದು ಶ್ಲಾಘಿಸಿದರು. ಸಿಸ್ಟರ್ ಜೆರಾಲ್ಡಿನ್, ಸಂತ ಫ್ರಾನ್ಸಿಸ್ ಕ್ಷೇವಿಯರ್ ಶಾಲೆಯ ನಿರ್ದೇಶಕರು, ಮಹಿಳಾ ದಿನದ ಶುಭಾಶಯ ತಿಳಿಸಿ, ಹೆಣ್ಣುಬ್ರೂಣ ಹತ್ಯೆಯು ಘೋರ ಅಪರಾದ, ಹೆಣ್ಣು ಕೀಳಲ್ಲ, ಆಕೆ ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾಳೆ ಎಂಬುದನ್ನು ತಿಳಿಸಿದರು. ಶ್ರೀ ಪರಮೇಶ್ವರ್, ಮಗ್ಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಮೈಕ್ರೋ ಫೈನಾನ್ಸ್ ಹಾವಳಿ ಬಗ್ಗೆ ಮಾತನಾಡಿ, ಸಾಲವನ್ನು ಜವಾಬ್ದಾರಿಯುತವಾಗಿ ಬಳಸುವ ಅಗತ್ಯವಿದೆ ಎಂದು ಹೇಳಿದರು. ವಂ. ಸ್ವಾಮಿ ರಾಜೇಂದ್ರ ಮಗ್ಗೆ ಧರ್ಮ ಕೇಂದ್ರದ ಸಹಾಯಕ ಗುರುಗಳು ಮಹಿಳೆಯರ ಅಗತ್ಯ ಮತ್ತು ತಾಯಂದಿರ ಮಹತ್ವದ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಅಮರಜ್ಯೋತಿ ಮಹಾಸಂಘದ ಅಧ್ಯಕ್ಷೆ ಶ್ರೀಮತಿ ಲಕ್ಷ್ಮಿ, ಶ್ರೀಮತಿ ನಸ್ತೀನ್ ಅಕ್ತರ್, ಮಗ್ಗೆ ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು, ಶ್ರೀಮತಿ ನಿರೀಕ್ಷಾ ಸಾರ್ವಜನಿಕ ಸಂಪರ್ಕ ಅಧಿಕಾರಿ ಮತ್ತು ಶ್ರೀ. ಜೀವನ್ ಜೋಯಲ್, ಸಹಾಯಕ ಲೆಕ್ಕಾದಿಕಾರಿ ಜೀವನಜ್ಯೋತಿ ಸ್ತ್ರೀ ಶಕ್ತಿ ಸೌಹಾರ್ದ ಸಹಕಾರಿ ನಿಯಮಿತ ಇವರು ಉಪಸ್ಥಿತರಿದ್ದರು. ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆಯೂ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಮಹಿಳೆಯರು ನೃತ್ಯ, ಹಾಡು ಮತ್ತು ನಾಟಕಗಳ ಪ್ರದರ್ಶನ ನೀಡಿದರು. ಸಂಸ್ಥೆಯ ಸಮುದಾಯ ಶಿಕ್ಷಕಿ ಲೂಸಿ ಅವರು ವಾರ್ಷಿಕ ವರದಿಯನ್ನು ಓದಿದರು. ಶ್ರೀಮತಿ ಅಶ್ವಿನಿ ಸ್ವಾಗತ ಭಾಷಣ ಮಾಡಿದರು. ಶ್ರೀಮತಿ ರೂಪ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಪಾಲಾಕ್ಷಿ ವಂದನಾಭಾಷಣ ನೀಡಿ, ಕಾರ್ಯಕ್ರಮವನ್ನು ಸಮಾರೋಪಗೊಳಿಸಿದರು. ಈ ಕಾರ್ಯಕ್ರಮ ಮಹಿಳಾ ಹಕ್ಕುಗಳ ಪ್ರಾಮುಖ್ಯತೆ ಮತ್ತು ಮಹಿಳಾ ಶಕ್ತಿಯ ಬೆಳವಣಿಗೆಯನ್ನು ಉನ್ನತ ಮಟ್ಟದಲ್ಲಿ ಪ್ರಚಾರ ಮಾಡಿತು. ಮಹಿಳೆಯರು ಸಮಾಜದ ಸಬಲ ಅಂಗವಾಗಲು ಪ್ರೇರಣೆಯಾಗಬೇಕೆಂಬ ಸಂದೇಶವನ್ನು ನೀಡಲಾಯಿತು. ಶ್ರೀಮತಿ ಲೂಸಿ ಮತ್ತು ಕವಿತಾ ಸಮುದಾಯ ಶಿಕ್ಷಕಿಯರು ಮಗ್ಗೆ ವಿಭಾಗ, ಇವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಯೋಜಿಸಿ ಕಾರ್ಯಗತಗೊಳಿಸಿದರು.





